ಕನ್ನಡ ಮಾಧ್ಯಮದ ಶಿಕ್ಷಣ - ಜೀವನದ ಉನ್ನತಿಗೆ ಕಾರಣ
ಶರತ್ ರೊಸಾರಿಯೋ
ಕನ್ನಡ ಅಧ್ಯಾಪಕ
ಪ್ರೌಢ ಶಾಲಾ ವಿಭಾಗ
ಶಿಶುವಿನಲ್ಲಿ ಸುಪ್ತವಾಗಿರುವ ಸ್ವಾಭಾವಿಕ, ಮಾನಸಿಕ, ಆಧ್ಯಾತ್ಮಿಕ ಮೊದಲಾದ ವಿವಿಧ ಜ್ಞಾನಾಂಶಗಳ ಸಂಶೋಧಿಸುವಿಕೆ, ಹೊರಗೆಳೆಯುವಿಕೆಯೇ ಶಿಕ್ಷಣ. – ಮಹಾತ್ಮ ಗಾಂಧಿ.
ಶಿಕ್ಷಣದ ಬಗ್ಗೆ ಈ ಮೇಲಿನಂತೆ ನುಡಿದ ಮಹಾತ್ಮ ಗಾಂಧಿಯವರು ಶಿಕ್ಷಣ ಎಂದಿಗೂ ಮಾತೃಭಾಷೆಯಲ್ಲಿರಬೇಕು ಎಮ್ದು ಪ್ರತಿಪಾದಿಸಿದರು. ಮಗು ಸ್ವಾಭಾವಿಕವಾಗಿ ತನ್ನ ಭಾವನೆಯನ್ನು ಅಭಿವ್ಯಕ್ತಪಡಿಸಲು ಹಾಗೂ ವಿಷಯಗಳನ್ನು ಗ್ರಹಿಸಲು ಮಾತೃಭಾಷೆಯ ಮಾಧ್ಯಮದ ಭೋದನೆಯಿಂದ ಸುಲಭಸಾಧ್ಯ.
ಬಜ್ಪೆಯಂತಹಾ ಕಡು ಗ್ರಾಮೀಣ ಪ್ರದೇಶದ ಸುತ್ತಲಿನ ಮಕ್ಕಳಿಗೆ ಪ್ರೌಢಶಾಲಾ ಶಿಕ್ಷಣವನ್ನು ಒದಗಿಸುವ ಉದ್ದೇಶವನ್ನಿಟ್ಟುಕೊಂಡು ೧೯೪೫ನೇ ವರ್ಷದಲ್ಲಿ ಅಂದಿನ ಬಜ್ಪೆ ಚರ್ಚಿನ ಧರ್ಮಗುರುಗಳಾದ ರೆ| ಫಾ| ಲಿಯೋ ಕರ್ವಾಲೊರವರು ಊರ ವಿದ್ಯಾಭಿಮಾನಿಗಳ ಸಹಾಯದಿಂದ ಸಂತ ಜೋಸೆಫರ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ಅಂದಿನಿಂದ ಬಜ್ಪೆ ಪ್ರದೇಶದ ಚಿತ್ರಣವೇ ಬದಲಾಯಿತು. ಯಾವುದೇ ಲಿಂಗ, ಜಾತಿ, ಅಂತಸ್ತಿನ ಭೇದವಿಲ್ಲದೆ ಎಲ್ಲರಿಗೂ ಕನ್ನಡ ಮಾಧ್ಯಮದಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪೂರೈಸಲು ಅವಕಾಶ ದೊರಕಿತು. ದೂರದ ಶಾಲೆಗಳಿಗೆ ಹೋಗಲಾಗದೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ವಿದ್ಯಾರ್ಥಿಗಳಿಗೆ ಇದೊಂದು ವರದಾನವಾಯಿತು.
ಕಳೆದ ಏಳು ದಶಕಗಳಿಂದ ಈ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಇಂದು ಈ ಈ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಿಸಮಾನವಾಗಿ ಕೆಲವೊಮ್ಮೆ ಅವರನ್ನು ಮೀರಿಸುವಷ್ಟು ಬೆಳೆದು ನಿಂತಿದ್ದಾರೆ. ಪ್ರತಿವರ್ಷವು ಉತ್ತಮ ಶೈಕ್ಷಣಿಕ ಸಾಧನೆ ದಾಖಲಾಗುತ್ತಿದೆ. ಎಲ್ಲಕ್ಕೂ ಮಿಗಿಲಾಗಿ ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳ ಸದುಪಯೊಗ ಪಡೆದು, ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಹೊಂದಿದ್ದಾರೆ. ಸಂಸ್ಥೆಯ ಧ್ಯೇಯೋದ್ದೇಶಕ್ಕೆ ತಕ್ಕಂತೆ ಉತ್ತಮ ನಾಗರಿಕರಾಗಿ, ಮಾನವೀಯ ಮೌಲ್ಯವುಳ್ಳ ವ್ಯಕ್ತಿಗಳಾಗಿ ರೂಪಿತವಾಗಿದ್ದಾರೆ.
ಕಳೆದ ನಾಲ್ಕು ದಶಕದ ಹಿಂದೆ ಕ್ರಿಶ್ಚಿಯನ್ ಬ್ರದರ್ಸ್ ರವರು ಈ ಸಂಸ್ಥೆಯ ಚುಕ್ಕಾಣಿ ಹಿಡಿದ ನಂತರ ಪ್ರೌಢಶಾಲಾ ವಿಭಾಗವು ಮತ್ತಷ್ಟು ಔನ್ನತ್ಯಕ್ಕೇರಿತು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಕ್ರೈಸ್ತ ಸಹೋದರರು ನೀಡಿದ ಪ್ರೋತ್ಸಾಹ ಅವಿಸ್ಮರಣೀಯ. ಕನ್ನಡ ಮಾಧ್ಯಮದಲ್ಲಿ ಕಲಿಯಲು ಬರುವ ಹೆಚ್ಚಿನ ವಿದ್ಯಾರ್ಥಿಗಳ ಕೌಟುಂಬಿಕ, ಸಾಮಾಜಿಕ ಹಿನ್ನೆಲೆ ತೀರಾ ಸಾಧಾರಣವಾಗಿರುತ್ತದೆ. ಅಂತಹಾ ವಿದ್ಯಾರ್ಥಿಗಳಿಗೆ ಶಾಲಾ ಅವಧಿ ಮುಗಿದ ನಂತರ ಸಂಜೆ ಹೊತ್ತಿನಲ್ಲಿ ಉಪಾಹಾರ ನೀಡಿ ಶಾಲಾ ಕೊಠಡಿಗಳಲ್ಲಿಯೇ ಓದಿಗೆ ಅವಕಾಶ ಕಲ್ಪಿಸಿರುವುದುಂಟು. ಇದರ ಉಸ್ತುವಾರಿಯನ್ನು ಬ್ರದರ್ಸ್ ರವರೇ ವಹಿಸಿದ್ದರು. ಆರ್ಥಿಕವಾಗಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಿದ ಶುಲ್ಕ ವಿನಾಯಿತಿ, ಉಚಿತ ಸಮವಸ್ತ್ರ, ಪುಸ್ತಕಗಳು ಹಾಗೂ ಹತ್ತು ಹಲವು ರೀತಿಯ ವಿದ್ಯಾರ್ಥಿ ವೇತನಗಳಿಂದ, ಬಾಡಿ ಹೋಗುತ್ತಿದ್ದ ವಿದ್ಯಾರ್ಥಿ ಜೀವನ ಅರಳಿ ಪರಿಮಳ ಬೀರಿದ್ದು ಸುಳ್ಳಲ್ಲ. ಶಿಕ್ಷಕ ವರ್ಗದ ಕಠಿಣ ಪರಿಶ್ರಮ, ಹೆತ್ತವರ ಬೆಂಬಲ, ಆಡಳಿತ ಮಂಡಳಿಯ ಪ್ರೋತ್ಸಾಹದಿಂದಾಗಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೈಯುತ್ತಿರುವುದು ಗಮನಾರ್ಹ.
೨೦೧೦-೧೧ ನೇ ಶೈಕ್ಷಣಿಕ ವರ್ಷದ ತನಕ ಕನ್ನಡ ಮಾಧ್ಯಮದಲ್ಲಿ ಬಾಲಕರಿಗೆ ಮಾತ್ರ ಅವಕಾಶವಿತ್ತು. ಹೆಣ್ಣು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಸದುದ್ದೇಶದಿಂದ ೨೦೧೧-೧೨ನೇ ವರ್ಷದಿಂದ ಹೆಣ್ಣುಮಕ್ಕಳಿಗೂ ಕನ್ನಡ ಮಾಧ್ಯಮಕ್ಕೆ ಪ್ರವೇಶವನ್ನು ನೀಡಲಾಯಿತು. ಕ್ರಿಶ್ಚಿಯನ್ ಬ್ರದರ್ಸ್ ರವರ ಕಾಳಜಿಯ ಫಲವಾಗಿ ಸಂಪೂರ್ಣ ಉಚಿತ ಶಿಕ್ಷಣವನ್ನು ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯವರಿಗೆ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಪಿ.ಯು.ಸಿ. ಹಂತದ ತನಕ ನೀಡುತ್ತಿರುವುದು ವಿಶೇಷ. [ ಈ ಸೌಲಭ್ಯವನ್ನು ೨೦೧೬-೧೭ನೇ ವರ್ಷದ ತನಕ ೧೨೫ ಮಂದಿ ವಿದ್ಯಾರ್ಥಿನಿಯವರು ಪಡೆದಿದ್ದಾರೆ.] ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸರಕಾರದ ಇಲಾಖೆಗಳಿಂದ ಲಭಿಸುತ್ತಿರುವ ವಿವಿಧ ಸೌಲಭ್ಯಗಳಾದ ಉಚಿತ ಪಠ್ಯ ಪುಸ್ತಕಗಳು, ಮಧ್ಯಾಹ್ನದ ಬಿಸಿಯೂಟ, ಹಾಲು, ಕಬ್ಬಿಣಾಂಶದ ಮಾತ್ರೆಗಳು ಮುಂತಾದುವುಗಳನ್ನು ಪಡೆಯುತ್ತಿದ್ದಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನವನ್ನು ಗಳಿಸಬೇಕು, ತನ್ಮೂಲಕ ಆಧುನಿಕ ಯುಗದ ಸ್ಪರ್ಧಾತ್ಮಕತೆಗೆ ಅನುವುಗೊಳ್ಳಬೇಕು ಎಂಬ ಉದ್ದೇಶದಿಂದ ಉಚಿತ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಎನ್.ಸಿ.ಸಿ., ವೈ.ಎಸ್.ಎಮ್., ಸಾಹಿತ್ಯ, ಪರಿಸರ, ವಿಜ್ಞಾನ ಸಂಘಗಳಿವೆ. ಕನಿಷ್ಟ ಶುಲ್ಕದಲ್ಲಿ ವಿದ್ಯಾರ್ಥಿಗಳು ಗರಿಷ್ಟ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ರೀತಿಯಾಗಿ ನಮ್ಮ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮವು ವರ್ಷದಿಂದ ವರ್ಷಕ್ಕೆ ಉನ್ನತಿ ಪಡೆಯುತ್ತಿದೆ. ಇತರ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದರೂ ನಮ್ಮ ಶಾಲೆಯಲ್ಲಿ ದಾಖಲಾತಿಯಲ್ಲಿ ಹೆಚ್ಚಳವಾಗುತ್ತಿದೆ. ೨೦೧೪-೧೫ರಲ್ಲಿ ೯೦ ವಿದ್ಯಾರ್ಥಿಗಳು ೮ನೇ ತರಗತಿ ಕನ್ನಡ ಮಾಧ್ಯಮಕ್ಕೆ ದಾಖಲಾತಿ ಹೊಂದಿದ್ದರೆ, ೨೦೧೫-೧೬ರಲ್ಲಿ ಈ ಸಂಖ್ಯೆ ೯೭ಕ್ಕೆ ಹಾಗೂ ೨೦೧೬-೧೭ರಲ್ಲಿ ೧೧೩ಕ್ಕೆ ಏರಿರುವುದು ಸಂತಸದ ವಿಷಯ.
ಈ ರೀತಿ ಬಜ್ಪೆ ಪರಿಸರದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದ ಕನ್ನಡ ಮಾಧ್ಯಮ ವಿಭಾಗವು ಇನ್ನಷ್ಟು ಶಿಕ್ಷಣಾರ್ಥಿಗಳಿಗೆ ಉನ್ನತ ರೀತಿಯ ಶಿಕ್ಷಣವನ್ನು ನೀಡುವಂತಾಗಲಿ. ಸಂಸ್ಥೆಯ ಧ್ಯೇಯೋದ್ದೇಶದಂತೆ ಸಮಾಜಕ್ಕೆ ಮೌಲ್ಯಯುತವಾದ ನಾಗರಿಕರನ್ನು ರೂಪಿಸುವಂತಾಗಲಿ. ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆದು ನಿಲ್ಲಲಿ ಎಂದು ಆಶಿಸೋಣ.
No comments:
Post a Comment