Monday, May 29, 2017

ಕಲಾ ವಿಭಾಗ - ರಾಮ್ ಪ್ರಸಾದ್ ಡಿ.ಆರ್.,

ಕಲಾ ವಿಭಾಗ

ರಾಮ್ ಪ್ರಸಾದ್ ಡಿ.ಆರ್.,
       ಕನ್ನಡ ಉಪಾನ್ಯಾಸಕ
             ಪ.ಪೂ.ಕಾಲೇಜು ವಿಭಾಗ

ಕಲೆ ಜೀವನದ ಪ್ರತಿಬಿಂಬ. ಕಲೆಯನ್ನೇ ಕಾಯಕವನ್ನಾಗಿ ಮಾಡಿಕೊಂಡರೆ ಜೀವನ ಸ್ವರ್ಗ ಸುಖ. ಕಲಾ ವಿಭಾಗವನ್ನೇ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಂಡು ವಿಶೇಷ ಸಾಧನೆ ಮಾಡುವುದೇ ಸಾರ್ಥಕ ಬದುಕು.

ಸಂತ ಜೋಸೆಫ್ ಪ್ರೌಢಶಾಲೆಯು ೧೯೭೨ರಲ್ಲಿ ಪದವಿಪೂರ್ವ ಕಾಲೇಜಾಗಿ ಪರಿವರ್ತನೆಗೊಂಡದ್ದು ಬಜ್ಪೆ ಜನತೆಗೆ ವರದಾನ. ಏಕೆಂದರೆ ಮಂಗಳೂರಿನಿಂದ ಸುಮಾರು ೧೮ ಕಿ.ಮೀ. ದೂರದಲ್ಲಿ ಇಂತಹ ಒಂದು ಕಾಲೇಜು ಸ್ಥಾಪನೆಯಾದದ್ದು ಗ್ರಾಮೀಣ ಪ್ರದೇಶದಲ್ಲಿ ಕಾಲೇಜುಗಳೇ ಇಲ್ಲದ ಸಂದರ್ಭದಲ್ಲಿ ಬಜ್ಪೆ ಪರಿಸರಕ್ಕೆ ಪದವಿಪೂರ್ವ ಕಾಲೇಜು ಬಂದದ್ದು ಮರಳುಗಾಡಿನಲ್ಲಿ ನೀರು ಸಿಕ್ಕಂತೆ ಆಯಿತು. ಆರ್ಥಿಕವಾಗಿ ಹಿಂದುಳಿದ ಹಳ್ಳಿಗಾಡಿನ ಮಕ್ಕಳಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಿ, ಇಲ್ಲಿನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಮುಂಚೂಣಿಯಾಯಿತು. ಈ ಪ್ರದೇಶದ ಅಜ್ಞಾನ ಅಂಧಕಾರ ತೊಳೆಯುವ ಪಾವನಗಂಗೆಯಂತೆ ಸೈಂಟ್ ಜೋಸೆಫ್ ಕಾಲೇಜು ತಲೆ ಎತ್ತಿ ನಿಂತಿತು.

ಆರ್ಟ್ಸ್ (ಕಲಾ ) ಶಿಕ್ಷಣ ಕಲಿಯುವ ಮಕ್ಕಳು ಸಾಮಾನ್ಯವಾಗಿ ಕಲಿಕೆಯಲ್ಲಿ ಹಿಂದುಳಿದವರೇ ಹೆಚ್ಚು. ೧೯೭೭ರಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ರವರು ಬಜ್ಪೆಗೆ ಆಗಮಿಸಿ ಮೂಲಭೂತ ಸೌಲಭ್ಯಗಳಾದ ನೀರಿನ ಸೌಕರ್ಯ, ಸುಸಜ್ಜಿತ ಕಟ್ಟಡ, ವಿಶಾಲ ಮೈದಾನ ವ್ಯವಸ್ಥೆ, ಉತ್ತಮ ಉಪನ್ಯಾಸಕರನ್ನು ಆಯ್ಕೆ ಮಾಡಿ ವಿದ್ಯಾದಾನ ಮಾಡಿಸಿದ ಕ್ರಿಶ್ಚಿಯನ್ ಬ್ರದರ್ಸ್ ರವರಿಗೆ ಧನ್ಯವಾದ ಸಲ್ಲಿಸಲೇಬೇಕು. ಕ್ರಿಶ್ಚಿಯನ್ ಬ್ರದರ್ಸ್ ರವರು ದೇವದೂತರಂತೆ ಬಂದು ಈ ಮಕ್ಕಳ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಚೇತನಗಳು. ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ಈ ಮಕ್ಕಳಿಗೆ ಅವಿರತ ನಲುವತ್ತು ವರ್ಷಗಳು ಸೇವೆ ಸಲ್ಲಿಸಿದ್ದಾರೆ.

ಇವರ ಅಪರಿಮಿತ ಶ್ರಮದ ಫಲವೇ ೧೯೮೫-೮೬ನೇ ಸಾಲಿನಲ್ಲಿ ನಮ್ಮ ಸಂಸ್ಥೆಗೆ ಎರಡು ಶ್ರೇಣಿ ದೊರೆತಿದೆ. ಎಲಿಜಬೆತ್ ಡಿಸೋಜಾ ಇವರು ೬ನೇ ಶ್ರೇಣಿ ಪಡೆದರೆ , ಜೆಸ್ಸಿ ಸೀಕ್ವೇರಾ ಇವರು ೮ನೇ ಶ್ರೇಣಿ ಪಡೆದಿರುತ್ತಾರೆ.

೨೦೧೪-೧೫ನೇ ಸಾಲಿನಲ್ಲಿ ಅಭಿಜಿತ ಶೆಟ್ಟಿ ಎಂಬ ವಿದ್ಯಾರ್ಥಿನಿ ಅನುದಾನಿತ ಪ.ಪೂ. ಕಾಲೆಜು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ೨೦೧೫-೧೬ನೇ ಸಾಲಿನಲ್ಲಿ ಸಿಲ್ವಿಯಾ ಹೋಜೊಕಿಮ್ ಎಂಬ ಮಣಿಪುರ ಸಂಜಾತೆ ವಿದ್ಯಾರ್ಥಿನಿ ೯೮% ಅಂಕ ಪಡೆದು ದ.ಕ. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಫರ್ಜಾನ ಎಂಬ ವಿದ್ಯಾರ್ಥಿನಿ ೨೦೧೬-೧೭ನೇ ಸಾಲಿನಲ್ಲಿ ಅನುದಾನಿತ ಪ.ಪೂ. ಕಾಲೇಜುಗಳ ವಿಭಾಗದಲ್ಲಿ  ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಕಲಾ ವಿದ್ಯಾರ್ಥಿಗಳು ಪ್ರತಿವರ್ಷ ಶೇ.೧೦೦ ಫಲಿತಾಂಶ ನೀಡುತ್ತಿರುವುದು ಹೆಮ್ಮೆಯ ವಿಷಯ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ನೆಲೆಸಿ ವಿಶೇಷ ಹುದ್ದೆಗಳನ್ನು ಅಲಂಕರಿಸಿ ಸಂತ ಜೋಸೆಫ್ ಕಾಲೇಜಿನ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಕೊಂಡೊಯ್ದಿದ್ದಾರೆ.

ಶಿಕ್ಷಣವೆಂದರೆ ಮರೀಚಿಕೆಯಾಗಿದ್ದ ಬಜ್ಪೆ ಪ್ರದೇಶಕ್ಕೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಿ.ಯು.ಸಿ. ವಿಭಾಗದಲ್ಲಿ ಶಿಕ್ಷಣ -೧ ಹಾಗೊ ಶಿಕ್ಷಣ -೨ ವಿಷಯಗಳ ಸಂಯೋಜನೆಯನ್ನು ಪರಿಚಯಿಸಿ ಬಡ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ನಂತರ ಎರಡು ವರ್ಷ “ಶಿಕ್ಷಣ” ವ್ಯಾಸಂಗ ಮಾಡಿದರೆ ಪ್ರಾಥಮಿಕ ಶಿಕ್ಷಕರಾಗುವ ಅವಕಾಶ ಕಲ್ಪಿಸಿಕೊಟ್ಟಿದ್ದರು.

ಕಲಾ ವಿಭಾಗಕ್ಕೆ ಆರಂಭದಲ್ಲಿ ಸಂಖ್ಯಾಶಾಸ್ತ್ರವನ್ನು ಪರಿಚಯಿಸಿದ ಕೀರ್ತಿ ಈ ವಿದ್ಯಾಸಂಸ್ಥೆಗೆ ಸಲ್ಲುತ್ತದೆ. ಸಂತ ಜೋಸೆಫರ ಕಾಲೇಜು ಆರಂಭವಾಗಿ ಇಂದಿನವರೆಗೆ ಇದ್ದ ಎಲ್ಲಾ ಪ್ರಾಂಶುಪಾಲರೂ ಸಹಾ ಕಲಾ ವಿಭಾಗಕ್ಕೆ ಬೋಧಿಸುವವರೇ ಆಗಿದ್ದರು.

ನಲುವತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳಿಗಾಗಿ ಹಗಲಿರುಳು ದುಡಿವ, ನುರಿತ ಉಪನ್ಯಾಸಕರ ಅವಿರತ ಶ್ರಮ ಅಡಗಿದೆ. ಹೆಚ್ಚಿನ ತರಗತಿ ತೆಗೆದುಕೊಳ್ಳುವುದು, ಉತ್ತೀರ್ಣರಾಗುವರೆಗೂ ಮತ್ತೆ ಮತ್ತೆ ಪರೀಕ್ಷೆ ಕೊಡುವುದು, ವಿಶೇಷ ಭಾಷಾ ತರಗತಿ ನೀಡಿ ವ್ಯಾಕರಣ ಮತ್ತು ಭಾಷೆಯ ಬಗ್ಗೆ ಹಿಡಿತ ಸಾಧಿಸಲು ಅನುಕೂಲಕರವಾಗಿದೆ.


ಇವೆಲ್ಲಾ ಸಾಧನೆಯ ಹಿಂದೆ ಕಥೋಲಿಕ್ ಶಿಕ್ಷಣ ಸಂಸ್ಥೆ, ಕ್ರಿಶ್ಚಿಯನ್ ಬ್ರದರ್ಸ್ ಹಾಗೂ ಉಪನ್ಯಾಸಕರು ಕಲಾ ವಿದ್ಯಾರ್ಥಿಗಳನ್ನು ರೂಪಿಸುವ ರೂವಾರಿಗಳಾಗಿದ್ದಾರೆ. ಕಲಾ ವಿದ್ಯಾರ್ಥಿಗಳಿಗಾಗಿ ದುಡಿದ ಬ್ರ. ವಿಲ್ಫ್ರೆಡ್, ಬ್ರ. ಕಾನ್ರಾಡ್, ಬ್ರ. ಹ್ಯಾರಿಸನ್, ಬ್ರ. ಚಾರ್ಲ್ಸ್, ಬ್ರ. ಹೆಕ್ಟರ್ ಪಿಂಟೋ ಇವೆರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಲಾ ವಿಭಾಗಕ್ಕೆ ವಿಶೇಷ ಪ್ರೋತ್ಸಾಹ ನೀಡಿ ಸಂಸ್ಥೆಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಕ್ರಿಶ್ಚಿಯನ್ ಬ್ರದರ್ಸ್ ರವರಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತಾ ಶುಭ ಹಾರೈಸುತ್ತೇವೆ.

No comments: